ಕಾಪ್ಟಿಕ್ ಚರ್ಚ್

ಇಸ್ಲಾಂ ಪ್ರಧಾನವಾದ ಈಜಿಪ್ಟಿನಲ್ಲಿ ವಾಸಿಸುವ ಕ್ರೈಸ್ತ ಜನಾಂಗದ ಮತೀಯ ಸಂಸ್ಥೆ. ಈಜಿಪ್ಟಿನ ಪ್ರಾಚೀನ ನಿವಾಸಿಗಳ ಸಂತತಿಗೆ ಸೇರಿದ ಇವರು ಪ್ರಾಚೀನ ಈಜಿಪ್ಟಿನ ಭಾಷೆಯಿಂದ ಹುಟ್ಟಿರುವ ಕಾಪ್ಟಿಕ್ ಭಾಷೆಯನ್ನಾಡುತ್ತಾರೆ. ಅರಬ್ಬೀ ಭಾಷೆಯ ಕುಬ್ತ್ ಎಂಬ ಪದದಿಂದ ಕಾಪ್ಟ್ ಪದ ಹುಟ್ಟಿದೆ. 451ರಲ್ಲಿ ಸಮಾವೇಶಗೊಂಡಿದ್ದ ಚಾಲ್ಸಿಡಾನ್ ಸಮ್ಮೇಳನದಲ್ಲಿ 637 ಕ್ರೈಸ್ತ ಪ್ರಧಾನ ಗುರುಗಳು ಕೊಟ್ಟ ಯೇಸುಕ್ರಿಸ್ತನ ದೇವಮಾನವ ದ್ವಿಸ್ವಭಾವ ತೀರ್ಮಾನವನ್ನು ಈಜಿಪ್ಟಿನ ಮತ್ತು ಇತರ ಪ್ರಾಚ್ಯದೇಶಗಳ ಕ್ರೈಸ್ತರು ವಿರೋಧಿಸಿ ಗ್ರೀಸಿನ ಮತ್ತು ರೋಮಿನ ಕೆಥೊಲಿಕರ ಅಧಿಕಾರವನ್ನು ತಿರಸ್ಕರಿಸಿದರು. ಸಿರಿಯ, ಇರಾಕ್ ಮತ್ತು ಭಾರತದ ಜ್ಯಾಕೊಬೈಟ್ ಚರ್ಚಿನವರಂತೆ ಕಾಪ್ಟಿಕ್ ಚರ್ಚ್ ಕೂಡ ಕ್ರಿಸ್ತನ ಒಂದೇ ಸ್ವಭಾವದ ತತ್ತ್ವವನ್ನು ಪ್ರತಿಪಾದಿಸುತ್ತದೆ. ಈ ಚರ್ಚಿನ ಅನುಯಾಯಿಗಳು ಅರಬರ ಆಕ್ರಮಣದ ಅನಂತರ ಗ್ರೀಕ್ ಭಾಷೆಯನ್ನು ತ್ಯಜಿಸಿ ಕಾಪ್ಟಿಕ್ ಮತ್ತು ಅರಬ್ಬೀ ಭಾಷೆಗಳನ್ನು ತಮ್ಮ ಪ್ರಾರ್ಥನೆಗೆ ಉಪಯೋಗಿಸಲಾರಂಭಿಸಿದರು. 19-20ನೆಯ ಶತಮಾನಗಳ ವರೆಗೂ ಈಜಿಪ್ಟಿಗೆ ಸೀಮಿತವಾಗಿದ್ದ ಇವರ ಪ್ರಭಾವ ಆಗ ಜೆರುಸಲೆಂ ಪ್ರದೇಶಕ್ಕೆ ಹರಡಿತು. ಅನಂತರ ಸೂಡಾನ್ ಮತ್ತು ಇಥಿಯೋಪಿಯಗಳಿಗೂ ಪ್ರಸರಿಸಿತು. ಕಾಪ್ಟಿಕ್ ಮತ್ತು ಗ್ರೀಕ್ ಚರ್ಚುಗಳ ತತ್ತ್ವಗಳ ನಡುವೆ ಅಧಿಕ ಭೇದ ಕಂಡುಬರುವುದಿಲ್ಲ.

 ಇವರ ಮತೀಯ ಮಂದಿರಗಳು ಆಕರ್ಷಕವಾಗಿದ್ದು ಅವುಗಳ ಗುಮ್ಮಟಗಳು ಅಂದವಾಗಿವೆ. ಅಲೆಕ್ಸಾಂಡ್ರಿಯದ ಪ್ರಧಾನಗುರುವೇ ಕಾಪ್ಟಿಕ್ ಚರ್ಚಿನ ಪ್ರಮುಖ ವ್ಯಕ್ತಿ. ಅವನ ಕೇಂದ್ರ ನಗರ ಕೈರೊ. ಈಜಿಪ್ಟ್ ದೇಶದಲ್ಲಿ ಇಸ್ಲಾಂಧರ್ಮದ ಪ್ರಭಾವ ಹೆಚ್ಚಾಗಿ ಕಾಪ್ಟಿಕ್ ಕ್ರೈಸ್ತರ ಅವನತಿಗೆ ಕಾರಣವಾಯಿತು. ಈಜಿಪ್ಟಿನಲ್ಲಿರುವ ಕಾಪ್ಟಿಕ್ ಕ್ರೈಸ್ತರ ಸಂಖ್ಯೆ ಸುಮಾರು 75,00,000.

 

(ಜಿ.ಆರ್.ಕೆ.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ